Published in the Sunday Prajavani on 12 January 2025
ಸದಾ ನಳನಳಿಸುವ ಹಸುರಿನಿಂದ ಕಂಗೊಳಿಸುವ ದೇಶದ ಹೆಸರು ಐಸ್‌ಲ್ಯಾಂಡ್. ಹಾಗೆಯೇ, 17 ಲಕ್ಷ ಚದರ ಕಿ.ಮೀ. ಹಿಮ ಹರಡಿಕೊಂಡಿರುವ ಪ್ರಪಂಚದ ಎರಡನೇ ಅತಿ ದೊಡ್ಡ ಹಿಮಾವೃತ ದೇಶದ ಹೆಸರು ಗ್ರೀನ್‌ಲ್ಯಾಂಡ್. ಈ ದೇಶಗಳ ಹೆಸರಿನಲ್ಲಿ ಇದೇಕೆ ಇಂತಹ ವೈರುದ್ಧ್ಯ ಎಂದು ನೀವು ಯಾವಾಗಲಾದರೂ ಯೋಚಿಸಿದ್ದೀರಾ? ನನಗಂತೂ, ಮೊದಲಿಗೆ ಈ ದೇಶಗಳಿಗೆ ಈ ಹೆಸರುಗಳು ಏಕೆ ಬಂದವು ಎಂಬುದು ಅಚ್ಚರಿಯ ಪ್ರಶ್ನೆಯಾಗಿ ಕಾಡತೊಡಗಿತು. ಅಂದಂತೆ, ಈ ಎರಡೂ ದೇಶಗಳನ್ನು ನಾಸಿಯನ್ನರು, ಅಂದರೆ, ಉತ್ತರ ಸ್ಕ್ಯಾಂಡಿನೇವಿಯನ್ನರು ಸ್ಥಾಪಿಸಿದರು. ಉತ್ತರ ಅಟ್ಲಾಂಟಿಕ್ ಸಾಗರದಾದ್ಯಂತ ಯಾನ ನಡೆಸಿದ ನಾಸಿಯನ್ನರು ಐಸ್‌ಲ್ಯಾಂಡ್‌ನಲ್ಲಿ ಜನವಸತಿ ಪ್ರದೇಶಗಳನ್ನು 9ನೇ ಶತಮಾನದಲ್ಲಿ ಸ್ಥಾಪಿಸಿದರೆ, ಗ್ರೀನ್‌ಲ್ಯಾಂಡ್‌ನಲ್ಲಿ ಜನವಸತಿಗಳನ್ನು 10ನೇ ಶತಮಾನದಲ್ಲಿ ಸ್ಥಾಪಿಸಿದರು.
ಬಹುತೇಕ ಹಿಮಾಚ್ಛಾದಿತ, ಮಂಜು ಮುಸುಕಿದ ಹಾಗೂ ಹಿಮಗಲ್ಲುಗಳಿಂದ ಕೂಡಿದ ಆರ್ಕ್ಟಿಕ್ ದೇಶವಾದ ಗ್ರೀನ್‌ಲ್ಯಾಂಡ್‌ನಲ್ಲಿ ಹೆಚ್ಚುಕಡಿಮೆ ಕಣ್ಣುಹಾಯಿಸಿದಲ್ಲೆಲ್ಲಾ ಬಿಳಿ ಬಣ್ಣದಿಂದ ಕೂಡಿದ ನೋಟವೇ ಕಾಣುತ್ತದೆ. ವಾಸ್ತವದಲ್ಲಿ ಹಸಿರು ಇಲ್ಲದಿರುವ ಈ ದೇಶಕ್ಕೆ ‘ಗ್ರೀನ್‌ಲ್ಯಾಂಡ್’ ಎಂಬ ಹೆಸರು ಹೇಗೆ ಬಂತು? ಎರಿಕ್ ದಿ ರೆಡ್ ಎಂಬಾತನಿಂದ ಈ ದೇಶಕ್ಕೆ ಈ ಹೆಸರು ಬಂದಿತು. ಕೊಲೆ ಮಾಡಿ ವಲಸೆ ಬಂದಿದ್ದ ಈತ, ಜನರನ್ನು ಆ ದ್ವೀಪದಲ್ಲಿ ನೆಲಸಲು ಆಕರ್ಷಿಸುವ ಉದ್ದೇಶದಿಂದ ಅದನ್ನು ‘ಗ್ರೀನ್ ಲ್ಯಾಂಡ್’ ಎಂದು ಕರೆದ. ಬೇಸಿಗೆಯ ಅಲ್ಪಾವಧಿಗೆ ಮಾತ್ರ ಇಲ್ಲಿ ಹಸಿರು ಕಾಣವುದನ್ನು ಬಿಟ್ಟರೆ ಉಳಿದಂತೆ ವರ್ಷಪೂರ್ತಿ ಹಿಮ ಹಾಗೂ ಮಂಜಿನದ್ದೇ ಆಧಿಪತ್ಯ. ಹೀಗಾಗಿ, ಇದರ ಹೆಸರು ಗ್ರೀನ್‌ಲ್ಯಾಂಡ್ ಎಂದಿದ್ದರೂ ಇದು ಹಸುರಿನಿಂದ ಕೂಡಿದ ದೇಶವಲ್ಲ. ಜನರನ್ನು ಇಲ್ಲಿ ನೆಲಸುವಂತೆ ಸೆಳೆಯಲು ಶತಮಾನಗಳ ಹಿಂದೆಯೇ ಮಾರ್ಕೆಟಿಂಗ್ ತಂತ್ರಗಾರಿಕೆಯ ಭಾಗವಾಗಿ ಹಾಗೆ ಕರೆಸಿಕೊಂಡ ದೇಶ ಇದು.
ಕುತೂಹಲಕರ ಸಂಗತಿಯೆAದರೆ, ಐಸ್‌ಲ್ಯಾಂಡ್ ದೇಶದ ಹೆಸರು ಇದಕ್ಕೆ ತದ್ವಿರುದ್ಧವಾಗಿದೆ. ಸಾಗಸ್ ಎಂದು ಕರೆಯಲಾಗುವ ಐಸ್ ಲ್ಯಾಂಡ್‌ನ ಐತಿಹಾಸಿಕ ಕಥಾನಕಗಳ ಪ್ರಕಾರ, ಈ ದ್ವೀಪಕ್ಕೆ 9ನೇ ಶತಮಾನದಲ್ಲಿ ಯಾನ ನಡೆಸಿದ ನಾಸ್ ಅನ್ವೇಷಕ ಹ್ರಫ್ನಾ-ಫ್ಲಾಕಿ ವಿಲ್ಜೆರಾಸನ್ ಈ ದೇಶಕ್ಕೆ ನಾಮಕರಣ ಮಾಡಿದ. ಐಸ್‌ಲ್ಯಾಂಡ್‌ಗೆ ತೆರಳುವ ಮಾರ್ಗಮಧ್ಯೆ ಆತನ ಮಗಳು ನೀರಿನಲ್ಲಿ ಮುಳುಗಿದಳು; ಜಾನುವಾರುಗಳು ಕೂಡ ಉಪವಾಸ ಬಿದ್ದು ಸಾವಿಗೀಡಾದವು. ವಿಷಣ್ಣನಾದ ಫ್ಲಾಕಿಯು ಪರ್ವತವೊಂದನ್ನು ಏರಿ ದೃಷ್ಟಿ ಹಾಯಿಸಿದಾಗ ಹಿಮಗುಡ್ಡಗಳಿಂದ ಕೂಡಿದ ಸಾಗರದ ಚಾಚು ಭಾಗ ಕಾಣಿಸಿತು. ಆದ್ದರಿಂದ ಆತ ಆ ಪ್ರದೇಶವನ್ನು ‘ಐಸ್‌ಲ್ಯಾಂಡ್’ ಎಂದು ಕರೆದ. ಅದೇನೇ ಇದ್ದರೂ, ಇತರರು ಅಲ್ಲಿ ಬಂದು ನೆಲೆಯೂರಿ ಸಂಪನ್ಮೂಲಗಳಿಗಾಗಿ ಪೈಪೋಟಿ ನಡೆಸುವುದನ್ನು ತಪ್ಪಿಸಲು ಪ್ರಜ್ಞಾಪೂರ್ವಕವಾಗಿಯೇ ಹೀಗೆ ಕರೆದಿರಬಹುದು ಎಂದು ಅಭಿಪ್ರಾಯಪಡುವವರು ಕೂಡ ಇದ್ದಾರೆ. ಈ ಎರಡನೇ ತರ್ಕವು ಆಸಕ್ತಿದಾಯಕವಾಗಿದ್ದರೂ, ಪ್ರಸ್ತುತ ಮಿಥ್ಯ ಎಂದು ಪರಿಗಣಿತವಾಗಿದೆ ಎಂಬುದು ಬೇರೆ ಮಾತು.
ಗ್ರೀನ್‌ಲ್ಯಾಂಡ್ ದೇಶವು ವಿಸ್ತೀರ್ಣದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ದ್ವೀಪವಾಗಿದೆ. ಇದೊಂದು ಸ್ವಾಯತ್ತ ದೇಶ ಕೂಡ. ಡೆನ್ಮಾರ್ಕ್ ದೇಶದಷ್ಟೇ ಭೂಪ್ರದೇಶದಿಂದ ಕೂಡಿದೆ. ಇದು ಅತ್ಯಂತ ದುರ್ಗಮವೆನ್ನಿಸುವಂತಹ ಭೂಪ್ರದೇಶವಾಗಿದ್ದರೂ 4,500ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಮನುಷ್ಯರು ನೆಲಸಿದ್ದಾರೆ ಎನ್ನಲಾಗಿದೆ. ಇಲ್ಲಿ ಜನವಸತಿಯ ಹಲವಾರು ನೆಲೆಗಳಿವೆ. ಶತಮಾನಗಳಿಂದಲೂ ಗ್ರೀನ್‌ಲ್ಯಾಂಡ್ ಪ್ರದೇಶವು ಇನ್ಯೂಯೆಟ್ ಮೂಲನಿವಾಸಿಗಳ ನೆಲೆಯಾಗಿದೆ. ಇಲ್ಲಿ ಜನವಸತಿ ನೆಲೆಗಳನ್ನು ಪರಸ್ಪರ ಸಂಪರ್ಕಿಸುವಂತಹ ರಸ್ತೆಗಳು ನಿರ್ಮಾಣಗೊಂಡಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು, ವೀಣಾ ವರ್ಲ್ಡ್ ನಲ್ಲಿ ಗ್ರೀನ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್‌ಗೆ ಹೊಸದಾಗಿ ಕ್ರೂಸ್ ಪ್ರವಾಸ ಸೌಲಭ್ಯ ಆರಂಭಿಸಿದ್ದೇವೆ. ಹೀಗಾಗಿ, ಇಲ್ಲಿ ಪ್ರಯಾಣಕ್ಕೆ ವಿಮಾನಯಾನವನ್ನು ಅಥವಾ ದೋಣಿಗಳನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯ. ಗ್ರೀನ್‌ಲ್ಯಾಂಡ್‌ಗೆ ಕ್ರೂಸ್‌ನಲ್ಲಿ ಪ್ರಯಾಣಿಸುವುದೇ ಅತ್ಯುತ್ತಮ.
ಈ ದೇಶಗಳಿಗೆ ನಿಜವಾಗಿಯೂ ವಿರೋಧಾಭಾಸದ ಈ ಹೆಸರುಗಳು ಹೇಗೆ ಬಂದವೆಂಬುದು ನನಗೆ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ, ನಮ್ಮ ದೇಶಕ್ಕೆ ಈಗಿರುವ ಹೆಸರು ಹೇಗೆ ಬಂತು? ಇಂಗ್ಲಂಡ್, ಸ್ವಿಟ್ಜರ್‌ಲಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹೆಸರುಗಳ ಹಿನ್ನೆಲೆ ಏನು? ಇದನ್ನೆಲ್ಲಾ ಕೆದಕಿದಾಗ, ದೇಶಗಳ ಹೆಸರಿನ ಹಿಂದೆ ಚಾರಿತ್ರಿಕ, ಸಾಂಸ್ಕೃತಿಕ, ಭೌಗೋಳಿಕ ಹಾಗೂ ರಾಜಕೀಯ ಸಂಗತಿಗಳ ಪ್ರಭಾವಗಳಿರುತ್ತವೆ ಎಂಬುದು ಮನವರಿಕೆಯಾಗುತ್ತದೆ.
ಪೂರ್ವದಿಂದಲೂ ಅಲ್ಲಿ ನೆಲಸಿದ್ದ ಬುಡಕಟ್ಟು ಅಥವಾ ನಾಯಕತ್ವ ಅಥವಾ ಸಾಮ್ರಾಜ್ಯಗಳನ್ನು ಆಧರಿಸಿ ಆಯಾ ದೇಶಕ್ಕೆ ಹೆಸರಿಡುವುದು ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ, ಫ್ರ‍್ಯಾನ್ಸ್ಗೆ ಫ್ರಾಂಕ್ಸ್ ನಿಂದ, ಸೌದಿ ಅರೇಬಿಯಾಯಕ್ಕೆ ಸೌದ್ ಸಾಮ್ರಾಜ್ಯದಿಂದ, ಕೊಲಂಬಿಯಾಕ್ಕೆ ಕ್ರಿಸ್ಟೋಫರ್ ಕೊಲಂಬಸ್‌ನಿಂದಾಗಿ ಆಯಾ ಹೆಸರು ಬಂದಿದೆ. ಥಾಯ್ಲೆಂಡ್‌ಗೆ ಅಲ್ಲಿ ನೆಲಸಿದ್ದ ‘ಥಾಯ್’ ಜನರಿಂದಾಗಿ ಹಾಗೂ ವಿಯೆಟ್ನಾಂಗೆ ಅಲ್ಲಿನ ‘ವಿಯೆಟ್’ ಜನರಿಂದಾಗಿ ಆ ಹೆಸರುಗಳು ಪ್ರಾಪ್ತವಾಗಿವೆ. ಹಾಗೆಯೇ ಇಂಗ್ಲಂಡ್ ಎಂಬುದಕ್ಕೂ ಪ್ರಾಚೀನ ಹಿನ್ನೆಲೆ ಇದೆ. ಹಳೆಯ ಇಂಗ್ಲಿಷ್‌ನಲ್ಲಿ ‘ಇಂಗ್ಲಾಲ್ಯಾಂಡ್’ ಎಂದರೆ ‘ದೇವತೆಗಳ ನಾಡು’ ಎಂದರ್ಥ. ಈ ದೇವತೆಗಳು ಮಧ್ಯಕಾಲೀನ ಯುಗದ ಆರಂಭದ ಕಾಲಘಟ್ಟದಲ್ಲಿ ಸ್ಯಾಕ್ಸನ್ ಮತ್ತು ಜೂಟ್‌ಗಳೊಂದಿಗೆ ಬ್ರಿಟನ್‌ಗೆ ವಲಸೆ ಬಂದ ಜೆರ್ಮಾನಿಕ್ ಬುಡಕಟ್ಟುಗಳಿಗೆ ಸೇರಿದವರು.
ಕೆಲವೊಮ್ಮೆ ದೇಶಗಳ ಹೆಸರುಗಳು ಜನರು ನಂಬಿದ ಮೌಲ್ಯಗಳು ಹಾಗೂ ನಂಬಿಕೆಗಳನ್ನು ಪ್ರತಿಬಿಂಬಿಸುವ ಆಳವಾದ ಅರ್ಥಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಜಪಾನ್ ಎಂಬುದು ನಿಪ್ಪೋನ್ ಎಂಬುದರಿಂದ ಒಡಮೂಡಿದೆ. ‘ಸೂರ್ಯ ಮೂಲ’ ಎಂಬುದು ಇದರ ಅರ್ಥ. ಈ ದೇಶದ ಜನತೆ ಪ್ರಕೃತಿಯ ಬಗ್ಗೆ ಹೊಂದಿರುವ ಪೂಜ್ಯ ಭಾವನೆಯನ್ನು ಹಾಗೂ ಸೂರ್ಯನನ್ನು ಬದುಕಿನ ಮೂಲ ಎಂದು ಪರಿಭಾವಿಸುವುದನ್ನು ಇದು ಎತ್ತಿ ತೋರಿಸುತ್ತದೆ. ನ್ಯೂಜಿಲೆಂಡ್ ಅನ್ನು ಮೌರಿ ಮೂಲನಿವಾಸಿಗಳು ‘ಔಟಿರಾ’ ಎನ್ನುತ್ತಾರೆ; ‘ಉದ್ದನೆಯ ಬಿಳಿ ಮೋಡದ ನಾಡು’ (ಲ್ಯಾಂಡ್ ಆಫ್ ದಿ ಲಾಂಗ್ ವೈಟ್ ಕ್ಲೌಡ್) ಎಂಬುದು ಇದರ ಅರ್ಥ. ಯೂರೊಪಿಯನ್ನರು ಇಲ್ಲಿಗೆ ಬಂದು ನೆಲಸುವುದಕ್ಕೆ ಬಲು ಪೂರ್ವದಲ್ಲೇ ಇಲ್ಲಿನ ದ್ವೀಪಗಳಲ್ಲಿ ನೆಲಸಿದ್ದ ಮೌರಿ ಜನರ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಪ್ರಾಮುಖ್ಯವನ್ನು ‘ಔಟಿರಾ’ ಹೆಸರು ಬಿಂಬಿಸುತ್ತದೆ. ಡಚ್ ಅನ್ವೇಷಕ ಏಬಲ್ ಟಾಸ್ಮನ್ 1642ರಲ್ಲಿ ನ್ಯೂಜಿಲೆಂಡ್ ದೇಶವನ್ನು ಮೊದಲಿಗೆ ಕಂಡ ಯೂರೊಪಿಯನ್. ಮೊದಲಿಗೆ, ಆತ ಇದನ್ನು ‘ಸ್ಟ್ಯಾಟೆನ್ ಲಾಂಡ್ತ್’ (ಲ್ಯಾಂಡ್ ಆಫ್ ದಿ ಸ್ಟೇಟ್ಸ್) ಎಂದು ಕರೆದ. ನಂತರ, ಡಚ್ಚಿನ ನಕ್ಷಾ ನಿರೂಪಕರು ಲ್ಯಾಟಿನ್‌ನಲ್ಲಿ ಇದನ್ನು ‘ನೋವಾ ಜೀಲ್ಯಾಂಡಿಯಾ (ನ್ಯೂಜಿಲೆಂಡ್) ಎಂದು ಕರೆದರು. ತರುವಾಯ, ಬ್ರಿಟಿಷ್ ಅನ್ವೇಷಕ ಜೇಮ್ಸ್ ಕುಕ್ 18ನೇ ಶತಮಾನದಲ್ಲಿ ತನ್ನ ಯಾನಗಳ ವೇಳೆ ಇದನ್ನು ಆಂಗ್ಲೀಕರಣಗೊಳಿಸಿ, ಇಂಗ್ಲಿಷರ ನಾಲಗೆಗೆ ಒಗ್ಗುವಂತೆ ‘ನ್ಯೂಜಿಲೆಂಡ್’ ಎಂದು ಕರೆದು ಜನಪ್ರಿಯಗೊಳಿಸಿದ.
ಕೆಲವೊಮ್ಮೆ ದೇಶಗಳಿಗೆ ತಮ್ಮ ವ್ಯಾಪ್ತಿಯಲ್ಲಿರುವ ಮಹತ್ವದ ಭೌಗೋಳಿಕ ಲಕ್ಷಣಗಳ ಹಿನ್ನೆಲೆಯಲ್ಲೂ ಹೆಸರು ಮೂಡುತ್ತದೆ. ಪ್ರಮುಖ ನದಿಗಳು, ಬೃಹತ್ ಪರ್ವತಗಳು, ವಿಶಾಲ ಬಯಲು ಪ್ರದೇಶಗಳು, ಬೃಹತ್ ವ್ಯಾಪ್ತಿಯ ಮರುಭೂಮಿಗಳು ಅಥವಾ ವಿಶಿಷ್ಟ ಕರಾವಳಿಗಳು ಇವುಗಳಲ್ಲಿ ಸೇರುತ್ತವೆ. ದೇಶದ ಅಸ್ಮಿತೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ರೂಪಿಸುವಲ್ಲಿ ಈ ಪ್ರಾಕೃತಿಕ ವಿಸ್ಮಯಗಳ ಪ್ರಾಮುಖ್ಯವನ್ನು ಅಂತಹ ಹೆಸರುಗಳು ಬಿಂಬಿಸುತ್ತವೆ. ಉದಾಹರಣೆಗೆ, ಕೃಷಿಗೆ ನೀರು, ಸಂಚಾರ ಮಾರ್ಗ ಹಾಗೂ ಸಾಂಸ್ಕೃತಿಕ ಮಹತ್ವಕ್ಕೆ ಕೊಡುಗೆ ನೀಡುವ ಮೂಲಕ ನಾಗರಿಕತೆಯ ವಿಕಾಸದಲ್ಲಿ ನದಿಗಳು ನಿರ್ಣಾಯಕ ಪಾತ್ರಗಳನ್ನು ವಹಿಸಿವೆ. ಪರ್ವತಗಳು ದೇಶದ ಸ್ವಾಭಾವಿಕ ಗಡಿಗಳನ್ನು ಗುರುತಿಸುವ ಜೊತೆಗೆ ಸದೃಢತೆ, ಕ್ಷಮತೆ ಹಾಗೂ ಕೆಲವೊಮ್ಮೆ ಪ್ರತ್ಯೇಕತೆಯನ್ನು ಸಂಕೇತಿಸುತ್ತವೆ. ಬಿಬ್ಲಿಕಲ್ ಚರಿತ್ರೆಗೆ ಹೆಸರಾದ ಜಾರ್ಡನ್ ದೇಶಕ್ಕೆ ಅಲ್ಲಿನ ಹೆಸರಾಂತ ಜಾರ್ಡನ್ ನದಿಯಿಂದಾಗಿ ಆ ಹೆಸರು ಬಂದಿದೆ. ಇದು ನಂಬಿಕೆ ಹಾಗೂ ವಿಮೋಚನೆಯ ಸಂಕೇತವೂ ಆಗಿದೆ. ಅದೇ ರೀತಿಯಾಗಿ, ಪಶ್ಚಿಮ ಆಫ್ರಿಕಾದ ಹೃದಯ ಭಾಗದಲ್ಲಿ ಹರಿಯುವ ನೈಜರ್ ನದಿಯಿಂದಾಗಿ ನೈಜರ್ ಮತ್ತು ನೈಜೀರಿಯಾಗಳು ಹೆಸರು ಪಡೆದಿವೆ. ದಕ್ಷಿಣ ಅಮೆರಿಕದಲ್ಲಿ ಅರ್ಜೆಂಟೀನಾದ ಹೆಸರು ಲ್ಯಾಟಿನ್ ಮೂಲದ ‘ಅರ್ಜೆಂಟಮ್’ನಿAದ, ಅಂದರೆ ‘ಬೆಳ್ಳಿ’ ಎಂಬುದರಿಂದ ಬಂದಿದೆ. ರಿಯೊ ಡ ಲಾ ಪ್ಲಾಟಾ, ಅಂದರೆ ರಿವರ್ ಆಫ್ ಸಿಲ್ವರ್‌ನ ಹೊಳೆಯುವ ಜಲರಾಶಿಯನ್ನು ಸ್ಪೇನ್ ಮೂಲದ ಅನ್ವೇಷಕರು ಆ ರೀತಿಯಾಗಿ ಕರೆದ ಇತಿಹಾಸವನ್ನು ಇದು ನೆನಪಿಸುತ್ತದೆ. ತನ್ನ ಮುಕ್ಕಾಗದ ಸೌಂದರ್ಯದಿಂದ ಇಂದಿಗೂ ಪ್ರವಾಸಿಗರನ್ನು ಚುಂಬಕದಂತೆ ತನ್ನತ್ತ ಸೆಳೆಯುವ ಮನಮೋಹಕ ಭೂಪ್ರದೇಶ ಇದಾಗಿದೆ.
ಹೀಗೆ, ದೇಶದ ಹೆಸರುಗಳೊಂದಿಗೆ ಆಳವಾದ ಐತಿಹಾಸಿಕ ಬೇರುಗಳು, ಪ್ರಾಚೀನ ನಾಗರಿಕತೆಗಳು, ಬುಡಕಟ್ಟುಗಳು ಅಥವಾ ಆಳ್ವಿಕೆಗಾರರ ಹಿನ್ನೆಲೆಗಳು ತಳುಕು ಹಾಕಿಕೊಂಡಿರುತ್ತವೆ. ಉದಾಹರಣೆಗೆ, ಈಜಿಪ್ಟ್ ಎಂಬುದು ಗ್ರೀಕ್‌ನ ‘ಐಜಿಪ್ಟಸ್’ ಎಂಬುದರಿಂದ ನಾಮಕರಣಗೊಂಡಿದೆ. ಈ ಹೆಸರುಗಳ ಮೂಲ ಹುಡುಕುವ ಪ್ರವೃತ್ತಿ ಹೊಂದಿರುವ ನನಗೆ, ಬುಕೀನಾ ಫ್ಯಾಸೋ ಎಂಬುದು ಕೂಡ ಗಮನಕ್ಕೆ ಬಂತು. ಬುಕೀನಾ ಫ್ಯಾಸೋ ಎನ್ನುವುದರ ಅರ್ಥ ‘ಪ್ರಾಮಾಣಿಕರ ನಾಡು’ ಅಥವಾ ‘ನೇರ ನಡೆನುಡಿಯ ಜನರ ನಾಡು’ ಎಂದಾಗಿದೆ.
ಇನ್ನು, ನಮ್ಮ ದೇಶದ ವಿಷಯಕ್ಕೆ ಬಂದರೆ, ‘ಭಾರತ್’ ಎಂಬುದು ಇಂಡಿಯಾದ ಅಧಿಕೃತ ಹೆಸರುಗಳಲ್ಲಿ ಒಂದಾಗಿದ್ದು, ಸಂವಿಧಾನದ 1ನೇ ವಿಧಿಯಲ್ಲಿ ಇದು ಅಡಕಗೊಂಡಿದೆ. ಸಂಸ್ಕೃತ ಗ್ರಂಥಗಳು ಹಾಗೂ ಪೌರಾಣಿಕ ಕಥನಗಳಲ್ಲಿ ಇದರ ಮೂಲವಿದ್ದು, ಮಹಾಭಾರತ ಮಹಾಕಾವ್ಯದಲ್ಲಿ ಉಲ್ಲೇಖಗೊಂಡಿರುವ ಹೆಸರಾಂತ ಭರತ ಚಕ್ರವರ್ತಿಯ ಗೌರವಾರ್ಥ ಈ ಹೆಸರು ಬಂದಿದೆ ಎಂಬ ವಿವರಣೆಗಳಿವೆ. ‘ಇಂಡಿಯಾ’ ಎಂಬುದರ ಮೂಲವು ಗ್ರೀಕ್ ಮತ್ತು ಲ್ಯಾಟಿನ್ ಬರಹಗಳಲ್ಲಿದ್ದು, ಇಂಡಸ್ ನದಿಯ ಪರಿಸರದಲ್ಲಿರುವ ಪ್ರದೇಶಕ್ಕೆ ಈ ಹೆಸರು ಬಂದಿರುವುದನ್ನು ಸೂಚಿಸುತ್ತದೆ.
ವ್ಯಕ್ತಿಗಳ ಹೆಸರುಗಳಿಗೆ ಅರ್ಥ ಇರುವಂತೆಯೇ ದೇಶಗಳ ಹೆಸರುಗಳಿಗೂ ಅರ್ಥವಿರುತ್ತದೆ. ಅವುಗಳ ಹಿನ್ನೆಲೆ ಆಸಕ್ತಿದಾಯಕವಾಗಿರುತ್ತದೆ. ದೇಶಗಳ ಹೆಸರನ್ನು ಬದಲಾವಣೆ ಮಾಡುವುದು ಕೂಡ ಶತಮಾನಗಳಿಂದ ನಡೆಯುತ್ತಿದೆ. ಕೆಲವೊಂದು ದೇಶಗಳ ಹೆಸರು ಬದಲಾಗುತ್ತಿರುವುದನ್ನು ವರ್ತಮಾನದಲ್ಲೂ ಕಾಣಬಹುದಾಗಿದೆ.
ಷೇಕ್‌ಸ್ಪಿಯರ್‌ನ ಕೃತಿಯೊಂದರಲ್ಲಿ ಬರುವ, ‘ಹೆಸರಿನಲ್ಲಿ ಏನಿದೆ? ಗುಲಾಬಿಯನ್ನು ಬೇರೆ ಯಾವ ಹೆಸರಿನಿಂದ ಕರೆದರೂ ಅದರ ಪರಿಮಳ ಅಂತೆಯೇ ಇರುತ್ತದೆ’ ಎಂಬ ಉದ್ಗಾರ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಪ್ರವಾಸ ಹಾಗೂ ಅನ್ವೇಷಣೆಗೆ ಹೊರಟಾಗ ದೇಶಗಳ ಹೆಸರುಗಳು ಅವು ನೀಡುವ ಸಮೃದ್ಧ ಅನುಭವಗಳನ್ನು ಕೂಡ ಧ್ವನಿಸುತ್ತವೆ. ತನ್ನ ನಿವಾಸಿಗಳಿಂದ ‘ಹೆಲ್ಲಾಸ್’ ಎಂದು ಕರೆಸಿಕೊಳ್ಳುವ ಗ್ರೀಸ್‌ನ ಪರಿಶುಭ್ರ ಕಡಲ ತೀರಗಳಿರಬಹುದು ಅಥವಾ ಹಳ್ಳಿ (ಹಾಡಿ) ಎಂಬ ಅರ್ಥವಿರುವ ‘ಕನಾಟ’ ಎಂಬ ಇರೋಕ್ವೋವಿಯನ್ ಮೂಲದ ಕೆನಡಾದ ಭವ್ಯ ಭೂಪ್ರದೇಶಗಳಿರಬಹುದು, ಪ್ರತಿಯೊಂದು ದೇಶವೂ ಅನ್ವೇಷಣೀಯ ಜಗತ್ತನ್ನು ಪ್ರವಾಸಿಗರ ಮುಂದಿರಿಸುತ್ತದೆ. ಪ್ರಯಾಣದ ಮಹತ್ವವು ಆ ಸ್ಥಳದ ಹೆಸರಿನೊಂದಿಗೆ ತಳುಕು ಹಾಕಿಕೊಂಡ ಅಲ್ಲಿನ ಸಂಸ್ಕೃತಿ, ಸ್ವಾಭಾವಿಕ ಸೊಬಗು ಹಾಗೂ ಆ ಜನರ ಆತಿಥ್ಯ,-ಆರ್ದ್ರತೆಯ ಕುರಿತಾದ ಮೈಮರೆಸುವ ಅನ್ವೇಷಣೆಯಲ್ಲಿ ಹುದುಗಿರುತ್ತದೆ. ನಮ್ಮ ವಸುಂಧರೆಯು ಅನ್ವೇಷಣೆಯನ್ನು ಪ್ರೇರೇಪಿಸುವ ಅಸಂಖ್ಯಾತ ತಾಣಗಳಿಂದ ಕೂಡಿದ ಬೃಹತ್ ನೆಲೆಯಾಗಿದೆ. ಪ್ರತಿಯೊಂದು ಸ್ಥಳವೂ ತನ್ನದೇ ಆದ ವಿಶಿಷ್ಟ ಕಥಾನಕ ಹಾಗೂ ಚೈತನ್ಯದಿಂದ ಕೂಡಿದ್ದು, ಹೆಸರಿನಿಂದಾಚೆಗಿನ ಜಗತ್ತನ್ನು ನೋಡಲು ಮತ್ತು ವೈವಿಧ್ಯದಿಂದ ಕೂಡಿದ ಪ್ರಪಂಚದ ಸೊಬಗಿನಲ್ಲಿ ಮೈಮರೆಯಲು ಆಹ್ವಾನಿಸುತ್ತದೆ.
Post your Comment
Please let us know your thoughts on this story by leaving a comment.