Published in the Sunday Vijay Karnataka on 19 January, 2025
... ಅಲಾರ್ಮ್ ಇಡದೇ ಇರುವುದು ನನಗೆ ತುಂಬಾ ಸಲೀಸು. ಆದರೆ, ಅಲಾರ್ಮ್ ಸೆಟ್ ಮಾಡಬೇಕೆಂಬ ಆಲೋಚನೆ ನನ್ನೊಳಗೆ ಉಂಟುಮಾಡುತ್ತಿದ್ದ ಒತ್ತಡ ಊಹೆಗೂ ಮೀರಿದ್ದು ಎಂಬುದು ಆ ಬಗ್ಗೆ ಆಮೇಲೆ ಯೋಚಿಸಿದಾಗ ನನಗೆ ಮನವರಿಕೆಯಾಯಿತು.
“ದೇವರಿಗೆ ಶಿರಬಾಗಿ ನಮಿಸು; ಅವನಿಗೆ ಧನ್ಯವಾದಗಳನ್ನು ಸಮರ್ಪಿಸು; ನೀನು ನಿದ್ದೆಯಿಂದ ಎದ್ದೇಳಬೇಕೆಂದುಕೊಂಡಿರುವ ಸಮಯವನ್ನು ಅವನಿಗೆ ಹೇಳು; ಅವನು ನಿನ್ನನ್ನು ಎಚ್ಚರಗೊಳಿಸುತ್ತಾನೆ. ನನ್ನ ಮಾತನ್ನು ನಂಬು. ನೀನು ಬರೋಬ್ಬರಿ ಅಂದುಕೊಂಡ ಸಮಯಕ್ಕೇ ಎದ್ದೇಳುತ್ತೀಯ. ಆದರೆ, ಮಾಡುವ ಪ್ರಾರ್ಥನೆ ಪ್ರಾಮಾಣಿಕವಾಗಿರಬೇಕು ಹಾಗೂ ನಂಬಿಕೆ ಇರಬೇಕು”- ಇದು ನಮ್ಮಲ್ಲಿ ಅಜ್ಜ ಅಜ್ಜಿಯರಿಂದ ಹಾಗೂ ಅಪ್ಪ ಅಮ್ಮಂದಿರಿಂದ ಮುಂಬರುವ ಪೀಳಿಗೆಗಳಿಗೆ ವರ್ಗಾವಣೆಯಾಗುತ್ತಾ ಬರುವ ಅಮೂಲ್ಯ ಹಿತವಚನ. ನಾನು ಕೂಡ ಈ ಕಿವಿಮಾತು ಕೇಳುತ್ತಲೇ ಬೆಳೆದವನು. ಅದರ ಮಾಯೆಯನ್ನು ಇವತ್ತಿಗೂ ನಾನು ಅನುಭವಿಸುತ್ತಲೇ ಇದ್ದೇನೆ. ನಮ್ಮ ಮಲಗುವ ಕೊಠಡಿಯಲ್ಲಿ ಇಂದಿಗೂ ಅಲಾರ್ಮ್ ಗಡಿಯಾರವಿಲ್ಲ. ಮೊಬೈಲ್ ಫೋನ್ ಬಂದ ಮೇಲೆ ಸುಧೀರ್ ತನ್ನ ಫೋನಿನಲ್ಲಿ ಬೆಳಿಗ್ಗೆ 6.15ಕ್ಕೆ ಅಲಾರ್ಮ್ ಇಟ್ಟಿರುತ್ತಾನೆ. ನಮ್ಮ ಕುಟುಂಬದಲ್ಲಿ ಎಲ್ಲಾ ಆಗುಹೋಗುಗಳ ಬಗ್ಗೆ ನಿಗಾ ವಹಿಸುವ ಸುಧೀರ್, ನಾವು ಅವಧಿ ಮೀರಿ ಮಲಗಿಬಿಡಬಾರದು ಎಂಬುದನ್ನು ಖಾತರಿಪಡಿಸಿಕೊಳ್ಳಲು ಅದನ್ನು ಬ್ಯಾಕ್ ಅಪ್ ಪ್ಲ್ಯಾನ್ ಆಗಿ ಬಳಸುತ್ತಾನೆ. ಆದರೆ ವಾಸ್ತವವೇನೆಂದರೆ, ನಾವು ಸಹಜವಾಗಿಯೇ ಬೇಗ ಎದ್ದೇಳುವುದರಿಂದ ಅಲಾರ್ಮ್ ರಿಂಗಣಿಸುವುದಕ್ಕೆ ಬಹಳ ಮುಂಚೆಯೇ ನಮ್ಮ ದಿನ ಶುರುವಾಗಿಬಿಟ್ಟಿರುತ್ತದೆ. ನಿಜವಾಗಿಯೂ, ದೇವರ ಮೇಲಿನ ನಂಬಿಕೆಯು ಅದ್ಭುತಗಳನ್ನು ಉಂಟುಮಾಡುತ್ತದೆ.
ಹೌದಲ್ಲವೇ? ನಂಬಿಕೆಯು ಮಹತ್ವದ ಪಾತ್ರ ವಹಿಸುತ್ತದೆ. ರಾತ್ರಿ ಮಲಗಿದ ನಾವು ಮರುದಿನ ಬೆಳಿಗ್ಗೆ ಎದ್ದೇ ತೀರುತ್ತೇವೆ ಎಂದು ಬೇರೆ ಯಾರು ಆಶ್ವಾಸನೆ ನೀಡಲು ಸಾಧ್ಯ? ಯಾವಾಗ ನನ್ನ ತಲೆಯಲ್ಲಿ ಅಲಾರ್ಮ್ ಇಡಬೇಕೆಂಬ ಯೋಚನೆ ಮೂಡುತ್ತದೋ ಆಗ ಅದರೊಟ್ಟಿಗೆ ನನ್ನೊಳಗೆ ಇನ್ನಷ್ಟು ಪ್ರಶ್ನೆಗಳು ಕೂಡ ತೂರಿಬರುತ್ತವೆ- ನಿನ್ನನ್ನು ನೀನೇ ನಂಬುವುದಿಲ್ಲವೇ? ನಿನಗೆ ಅಲಾರ್ಮ್ ಅಗತ್ಯವಾದರೂ ಏಕೆ? ನಿನ್ನಲ್ಲೇ ಅಡಗಿರುವ ಜೈವಿಕ ಗಡಿಯಾರ ಏಕೆ ಹೊಂದಾಣಿಕೆಗೊAಡಿಲ್ಲ? ಸಹಜವಾಗಿ ಎಚ್ಚರಗೊಳ್ಳುವ ಬಗ್ಗೆ ನಿನ್ನ ಮೇಲೇ ನಿನಗೆ ನಂಬಿಕೆ ಇಲ್ಲವಾದರೆ, ನಿನ್ನ ತಂಡದವರಿಗೆ ನೀನು ಹೇಗೆ ಭರವಸೆ ನೀಡಲು ಸಾಧ್ಯ? ನಿನ್ನ ಶರೀರವು ನಿನ್ನ ಮನಸ್ಸಿನ ಮಾತು ಕೇಳುವುದಿಲ್ಲವೇ? ನಿನ್ನ ತಲೆ ಹಾಗೂ ಹೃದಯದ ನಡುವಿನ ಸಾಮರಸ್ಯ ಸರಿಯಿಲ್ಲವೇ? ನಿನ್ನ ಬಗ್ಗೆ ನಿನಗೆ ವಿಶ್ವಾಸವಿಲ್ಲದಿದ್ದರೆ ಕನಿಷ್ಠ ದೇವರನ್ನಾದರೂ ನಂಬು; ಹೀಗೆ ಒಳಗೆ ತಾಕಲಾಟ ದಾಂಗುಡಿ ಇಡುತ್ತದೆ, “ಇಲ್ಲ, ನಾನು ಅಲಾರ್ಮ್ ಸೆಟ್ ಮಾಡುವುದಿಲ್ಲ. ಸ್ವತಃ ನಾನೇ ಎದ್ದೇಳುತ್ತೇನೆ” ಎಂದು ಗಟ್ಟಿ ನಿರ್ಧಾರ ಮಾಡಿದ ನಂತರವೇ ಒಳಗಿನ ಯುದ್ಧ ಕೊನೆಗೊಳ್ಳುತ್ತದೆ. ಆಮೇಲೆ, ಅಂದುಕೊAಡ ಸಮಯಕ್ಕೆ ಸರಿಯಾಗಿ ಎದ್ದುಬಿಡುತ್ತೇನೆ.
ಆದರೆ, ಕೆಲವೊಮ್ಮೆ ಅಲಾರ್ಮ್ ಇಡಲೇಬೇಕಾದ ಸನ್ನಿವೇಶಗಳು ಕೂಡ ಉಂಟಾಗುತ್ತವೆ. ಲಂಡನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲಾರ್ಮ್ ಇಡಲೇಬೇಕಾದ ಪ್ರಸಂಗ ಉಂಟಾಗಿದ್ದುದು ಈಗ ನೆನಪಾಗುತ್ತಿದೆ. ಅದು ಕೇವಲ ಒಂದು ದಿನದ ಭೇಟಿಯಾಗಿತ್ತು. ಇನ್ನೂ ನಿಖರವಾಗಿ ಹೇಳಬೇಕೆಂದರೆ, ಅದನ್ನು ಕೇವಲ ಒಂದು ರಾತ್ರಿಯ ಭೇಟಿ ಎನ್ನಬಹುದು. ‘ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್’ ನಾಟಕವನ್ನು ನೋಡಿ, ನಮ್ಮ ಅತಿಥಿ ಪ್ರವಾಸಿಗರಿಗೆ ಅದು ಇಷ್ಟವಾಗುತ್ತದೋ, ಇಲ್ಲವೋ ಎಂಬುದನ್ನು ಅವಲೋಕಿಸುವ ಕಾರಣಕ್ಕಾಗಿ ಅಲ್ಲಿಗೆ ಹೋಗಿದ್ದೆ. ರಾತ್ರಿ ವಿಮಾನ ಹತ್ತಿದ ನಾನು ಬೆಳಿಗ್ಗೆ ಲಂಡನ್ ತಲುಪಿದೆ. ಮಧ್ಯಾಹ್ನ ನಮ್ಮ ಅಸೋಸಿಯೇಟ್‌ಗಳೊಂದಿಗೆ ಮೀಟಿಂಗ್ ಮಾಡಿದೆ. ಸಂಜೆ ನಾಟಕ ನೋಡಿದೆ. ರಾತ್ರಿ ಹೋಟೆಲ್‌ಗೆ ವಾಪಸ್ಸು ಬಂದೆ. ಅದಾದ ಬೆಳಿಗ್ಗೆ 6ಕ್ಕೆ ಪುನಃ ವಿಮಾನ ನಿಗದಿಯಾಗಿತ್ತು. ಅದಕ್ಕಾಗಿ, ಬೆಳಕು ಹರಿಯುವ ಮುನ್ನವೇ ರಾತ್ರಿ 3ಕ್ಕೆ ನಾನು ಹೋಟೆಲ್‌ನಿಂದ ಹೊರಡಬೇಕಿತ್ತು. ಭಾರತ ಹಾಗೂ ಯುಕೆ ನಡುವೆ ಐದೂವರೆ ಗಂಟೆಗಳ ವ್ಯತ್ಯಾಸವಿರುವುದರಿಂದ ಕೇವಲ ಒಂದು ದಿನದೊಳಗೆ ಅಲ್ಲಿನ ಸನ್ನಿವೇಶಕ್ಕೆ ಹೊಂದಿಕೊಳ್ಳುವುದು ಅಸಾಧ್ಯವಾಗಿತ್ತು. ಈ ಸಮಯದ ವ್ಯತ್ಯಾಸ ಹಾಗೂ ದಣಿವಿನಿಂದಾಗಿ, ಸ್ವತಃ ನಾನಾಗಿಯೇ ಎಂದಿನಂತೆ ಸಮಯಕ್ಕೆ ಸರಿಯಾಗಿ ಎದ್ದೇಳುವೆನೆಂಬ ವಿಶ್ವಾಸ ಇಲ್ಲವಾಗಿತ್ತು. ಆದ್ದರಿಂದ, ಹೋಟೆಲ್ಲಿನ ರಿಸೆಪ್ಟನ್‌ನಲ್ಲಿದ್ದವರಿಗೆ ಕರೆ ಮಾಡಿ ಎದ್ದೇಳಿಸುವಂತೆ ಸೂಚಿಸಿದೆ; ನನ್ನ ಫೋನ್‌ನಲ್ಲಿ ಅಲಾರ್ಮ್ ಇರಿಸಿದೆ; ಇಷ್ಟಾದರೂ ನನಗೆ ವಿಶ್ವಾಸ ಬರಲಿಲ್ಲ. ನನಗೆ ಅಲಾರ್ಮ್ ಇಡುವ ಅಭ್ಯಾಸ ಇಲ್ಲವಾದ್ದರಿಂದ ಸುಧೀರ್‌ಗೆ ಕರೆ ಮಾಡಿ, “ನನ್ನನ್ನು ಭಾರತೀಯ ಸಮಯ ಬೆಳಿಗ್ಗೆ 8.30ಕ್ಕೆ ಎಚ್ಚರಗೊಳಿಸು ಅಥವಾ ನನ್ನ ಕೊಠಡಿಗೆ ಫೋನ್ ಕನೆಕ್ಟ್ ಮಾಡುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳು.” ಎಂದೆ. ಸುಧೀರ್, ನನ್ನ ಈ ಭ್ರಾಂತಿಯನ್ನು ನೋಡಿ ನಗುತ್ತಾ, “ಆಯ್ತ” ಎಂದ. ಇಷ್ಟೆಲಾ ಮಾಡಿ ಮುಗಿಸಿದ ಮೇಲಷ್ಟೇ ನಾನು ನಿಶ್ಚಿಂತೆಯಿAದ ನಿದ್ದೆಗೆ ಜಾರಿದೆ.
ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ, ಅಲಾರ್ಮ್ ಇಡದಿದ್ದಾಗ ನಾನು ಯಾವುದೇ ಒತ್ತಡವಿಲ್ಲದೆ ಇರುತ್ತೇನೆ; ಅದನ್ನು ಇರಿಸಿದ್ದಾಗ ಒತ್ತಡದಲ್ಲಿರುತ್ತೇನೆ. ನಿದ್ದೆಯಿಂದ ಸಹಜವಾಗಿ ತಂತಾನೇ ಎದ್ದೇಳುವುದು ಆರಾಮದಾಯಕ ಎನ್ನಿಸುತ್ತದೆ. ಆದರೆ, ಅಲಾರ್ಮ್ ಇರಿಸುವುದು ತೀವ್ರವಾಗಿ ಚಡಪಡಿಕೆ ಉಂಟುಮಾಡುತ್ತದೆ.
ಆದರೆ, ನಮ್ಮ ಪ್ರವಾಸಗಳ ವೇಳೆ, ಟೂರಿಸ್ಟ್ ಅತಿಥಿಗಳಿಗೆ ಬೆಳಿಗ್ಗೆ ಎಚ್ಚರಿಸಲು ಕರೆ ಮಾಡುವುದು ಮಹತ್ವದ ಜವಾಬ್ದಾರಿಯಾಗಿರುತ್ತದೆ. ಅಂತಹ ಸಂದರ್ಭದಲ್ಲಿ, ನಮ್ಮೊಳಗಿನ ಜೈವಿಕ ಗಡಿಯಾರವನ್ನು ಏರುಪೇರಾಗಿಸುವ ದೇಶ-ದೇಶಗಳ ನಡುವಿನ ಸಮಯ ವ್ಯತ್ಯಾಸ ಹಾಗೂ ಪ್ರಯಾಣದ ದಣಿವಿನಿಂದಾಗಿ, “ದಯವಿಟ್ಟು ಅಲಾರ್ಮ್ ಗೊಡವೆಯೇ ಬೇಡ” ಎಂಬ ನನ್ನ ವೈಯಕ್ತಿಕ ನೀತಿಯನ್ನು ಬದಿಗಿರಿಸಬೇಕಾಗುತ್ತದೆ. ಇನ್ನು, ಜೆಟ್‌ಲ್ಯಾಗ್ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ, ‘ಅದೇನು ಮಹಾ, ಅದೇನೂ ನನಗೆ ಕಾಟ ಕೊಡಲಾರದು’ ಎಂದು ತುಂಬಾ ಲಘುವಾಗಿ ಭಾವಿಸಿದ್ದೆ. ಆದರೆ, ನನ್ನ ಮೊದಲ ಅಮೆರಿಕ ಮತ್ತು ಆಸ್ಟ್ರೇಲಿಯಾ ಪ್ರವಾಸಗಳ ವೇಳೆಯೇ ಜೆಟ್‌ಲ್ಯಾಗ್ ಬಗೆಗಿನ ಆ ಹಗುರ ದೃಷ್ಟಿಕೋನ ಚಿಂದಿಯಾಗಿ ಹೋಗಿತ್ತು. ಈ ಹಗುರ ಧೋರಣೆಯಿಂದಾಗಿ,, ನಾನು ಮತ್ತು ನೀಲ್, ಆ ಪ್ರವಾಸಗಳ ವೇಳೆ ಮೊದಲ ದಿನದ ವೇಳಾಪಟ್ಟಿಯಲ್ಲಿ ಸಾಕಷ್ಟು ಎಡವಟ್ಟು ಮಾಡಿಕೊಂಡುಬಿಟ್ಟಿದ್ದೆವು. ಜೆಟ್‌ಲ್ಯಾಗ್ ಎಂಬುದು ವಾಸ್ತವ ಹಾಗೂ ಅದರ ಪರಿಣಾಮದಿಂದ ಪಾರಾಗಲು ಸಿದ್ಧತೆ ಅಗತ್ಯ ಎಂಬುದು ಆಗ ನಮಗೆ ತಕ್ಷಣವೇ ಅರಿವಾಯಿತು.
ಭಾರತಕ್ಕಿಂತ ಮೊದಲೇ ಸೂರ್ಯೋದಯವಾಗುವ ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಹಾಂಕಾಂಗ್, ಸಿಂಗಪುರದಂತಹ ಪೂರ್ವ ದೇಶಗಳಿಗೆ ಪ್ರಯಾಣಿಸುವುದಿದ್ದರೆ ಒಂದು ತಿಂಗಳು ಮುಂಚಿನಿಂದಲೇ ಬೇಗ ಏಳುವುದನ್ನು ಅಭ್ಯಾಸ ಮಾಡುವುದು ಸೂಕ್ತ. ನೀವು ಪ್ರಯಾಣಿಸಲಿರುವ ದೇಶದ ಸಮಯದ ವ್ಯತ್ಯಾಸವನ್ನು ತಿಳಿದು, ದಿನಕ್ಕೆ 15 ನಿಮಿಷದಂತೆ ಮುಂಚಿತವಾಗಿ ಎದ್ದೇಳುವುದನ್ನು ಅಭ್ಯಾಸ ಮಾಡಬೇಕು. ನೀವು ಹೊರಡಲು ಇನ್ನೊಂದು ವಾರವಿರುವಂತೆಯೇ ನಿಮ್ಮ ಜೈವಿಕ ಗಡಿಯಾರವನ್ನು ಆ ದೇಶದ ಸಮಯಕ್ಕೆ ಹೊಂದಿಸಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ, ನೀವು ಆ ದೇಶದಲ್ಲಿ ಇಳಿದ ಮೇಲೆ ಅಲ್ಲಿನ ಸನ್ನಿವೇಶಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಅಂದಂತೆ, ಬೆಳಿಗ್ಗೆ ಬೇಗ ಏಳುವ ಅಭ್ಯಾಸವಿರುವವರಿಗೆ ಪೂರ್ವ ದೇಶಗಳ ಸಮಯಕ್ಕೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಯೇ, ರಾತ್ರಿ ತಡವಾಗಿ ಮಲಗುವ ಅಭ್ಯಾಸವುಳ್ಳವರಿಗೆ ಪಶ್ಚಿಮದ ದೇಶಗಳಿಗೆ ಪ್ರಯಾಣಿಸಿದಾಗ ಹೊಂದಾಣಿಕೆ ಸುಲಭವಾಗುತ್ತದೆ.
ಪಶ್ಚಿಮದ ದುಬೈ, ಮಧ್ಯ ಪ್ರಾಚ್ಯ ಅಥವಾ ಯೂರೊಪ್‌ನ ದೇಶಗಳಿಗೆ ಪಯಣ ಮಾಡುವುದಿದ್ದರೆ, ಒಂದು ತಿಂಗಳ ಮುನ್ನ, ತಡವಾಗಿ ಮಲಗಿ ನಿಧಾನವಾಗಿ ಏಳುವುದನ್ನು ಅಭ್ಯಾಸ ಮಾಡಬೇಕು. ಮಾರ್ಚ್ ಕೊನೆಯಿಂದ ಹಿಡಿದು ಅಕ್ಕೋಬರ್ ಕೊನೆಯವರೆಗೆ ಭಾರತ ಹಾಗೂ ಬಹುತೇಕ ಯೂರೊಪ್ ದೇಶಗಳ ಸಮಯ ವ್ಯತ್ಯಾಸವು ಸುಮಾರು ಮೂರೂವರೆ ಗಂಟೆಗಳಷ್ಟಿರುತ್ತದೆ. ಗ್ರೀಸ್ ಅಥವಾ ಟರ್ಕಿಗೆ ಇದು ಎರಡೂವರೆ ಗಂಟೆಯಷ್ಟಿರುತ್ತದೆ. ಚಳಿಗಾಲದಲ್ಲಿ ಈ ವ್ಯತ್ಯಾಸವು ನಾಲ್ಕೂವರೆ ಗಂಟೆಗಳವರೆಗೂ ಹಿಗ್ಗುತ್ತದೆ. ಯುಕೆ ವಿಷಯದಲ್ಲಿ ಇದು ನಾಲ್ಕೂವರೆಯಿಂದ ಐದೂವರೆ ಗಂಟೆಗಳಷ್ಟಿರುತ್ತದೆ. ಪ್ರಯಾಣಕ್ಕೆ ಮುನ್ನ ನಿಮ್ಮ ಜೈವಿಕ ಗಡಿಯಾರವನ್ನು ಹೊಂದಾಣಿಕೆಗೊಳಿಸಿಕೊಳ್ಳುವುದು ನೀವು ಹೋಗಲಿರುವ ದೇಶದ ಹೊಸ ಸಮಯಕ್ಕೆ ಹೊಂದಿಕೊಳ್ಳುವುದನ್ನು ಸುಲಭಗೊಳಿಸುತ್ತದೆ.
ಅದೇ ರೀತಿಯಾಗಿ, ವಿಮಾನದ ಪ್ರಯಾಣದ ವೇಳೆ ತಕ್ಕ ಹೊಂದಾಣಿಕೆ ಮಾಡಿಕೊಳ್ಳುವುದು ಕೂಡ ಮತ್ತೊಂದು ಮುಖ್ಯ ಅಂಶವಾಗಿರುತ್ತದೆ. ನೀವು ಪ್ರಯಾಣ ಮುಗಿಸಿ ವಿಮಾನ ಇಳಿಯುವ ವೇಳೆ ಬೆಳಿಗ್ಗೆಯಾಗಿದ್ದರೆ ವಿಮಾನದಲ್ಲಿ ಸೂಕ್ತ ವಿಶ್ರಾಂತಿ ಪಡೆಯಬೇಕು. ವಿಮಾನದ ಅಟೆಂಡೆಂಟ್‌ಗಳಿಗೆ, “ನಾನು ರೆಸ್ಟ್ ಪಡೆಯುತ್ತೇನೆ. ಡಿಸ್ಟರ್ಬ್ ಮಾಡಬೇಡಿ” ಎಂದು ತಿಳಿಸಬೇಕು. ಒಂದೊಮ್ಮೆ ನೀವು ಪ್ರಯಾಣ ಮುಗಿಸಿ ಇಳಿಯುವ ಸಮಯ ರಾತ್ರಿಯಾಗಿದ್ದರೆ ವಿಮಾನದಲ್ಲಿ ಪ್ರಯಾಣಿಸುವಾಗ ನಿದ್ದೆ ಮಾಡದೆ ಎಚ್ಚರವಾಗಿಯೇ ಇರುವುದು ಸೂಕ್ತ. ಇಷ್ಟವಾದ ಪುಸ್ತಕ ಓದುತ್ತಾ, ಸಿನಿಮಾ ನೋಡುತ್ತಾ ಅಥವಾ ನಿಮ್ಮ ಡಿವೈಸ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡ ಕಂಟೆಂಟ್‌ಗಳನ್ನು ನೋಡುತ್ತಾ ಮನರಂಜನೆಯಲ್ಲಿ ಮಗ್ನವಾಗಬೇಕು. ಹಿಂದೆ ನನ್ನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಪದ್ಮಾ ವಾಘ್ ಎಂಬುವವರು ದಿನಪತ್ರಿಕೆಗಳ ಕ್ಲಿಪ್ಪಿಂಗ್‌ಗಳನ್ನು ಒಟ್ಟೈಸಿಕೊಂಡು ತಂದು ವಿಮಾನ ಪ್ರಯಾಣದ ವೇಳೆ ಓದಿ ಮುಗಿಸುತ್ತಿದ್ದರು. ಹೀಗೆ, ಹೆಚ್ಚು ಹೊತ್ತು ಎಚ್ಚರವಾಗಿರುವುದಕ್ಕೆ ಕೂಡ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ನಮ್ಮ ಅತಿಥಿ ಪ್ರವಾಸಿಗರಿಗೆ ಯಾವಾಗ ಬೆಳಗಿನ ಅಲಾರ್ಮ್ ಮುಖ್ಯವಿರುತ್ತದೋ ಆಗ ನಮ್ಮ ಮ್ಯಾನೇಜರ್‌ಗಳು ಅದನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಆದರೆ, ಒಂದೊಮ್ಮೆ ಅಲಾರ್ಮ್ ಎಂಬುದೇ ಇಲ್ಲದಿದ್ದ ಕಾಲವೊಂದಿತ್ತು. ಆಗ ಜನರು ದೇವರ ಮೇಲಿನ ನಂಬಿಕೆಯನ್ನೇ ಅವಲಂಬಿಸಿ ನಿದ್ದೆಗೆ ಜಾರುತ್ತಿದ್ದರು. ಬೆಳಿಗ್ಗೆ ಬೇಗ ಎಚ್ಚರವಾಗಲೆಂದು ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಜಾಸ್ತಿ ನೀರು ಕುಡಿದು ಮಲಗುತ್ತಿದ್ದುದೂ ಉಂಟು. ನಾನು, ಒಮ್ಮೆ ಕುತೂಹಲಕ್ಕಾಗಿ ಗೂಗಲ್‌ನಲ್ಲಿ “ಅಲಾರ್ಮ್ ಬರುವ ಮುನ್ನ ಜನರು ಹೇಗೆ ಬೇಗ ಎದ್ದೇಳುತ್ತಿದ್ದರು?” ಎಂದು ಕೇಳಿದೆ. ಆಗ ನನಗೆ, “ಅಮೆರಿಕನ್ ಲೆವಿ ಹಚ್ಚಿನ್ಸ್ 1787ರಲ್ಲಿ ಮೊದಲಿಗೆ ಅಲಾರ್ಮ್ ಕಂಡುಹಿಡಿದ. ಆಮೇಲೆ, 1847ರಲ್ಲಿ ಫ್ರೆಂಚ್ ಸಂಶೋಧಕ ಆಂಟೋನಿ ರೆಡಿಯರ್ ಮೊದಲ ಮೆಕ್ಯಾನಿಕಲ್ ಅಡ್ಜಸ್ಟಬಲ್ ಅಲಾರ್ಮ್ ಗಡಿಯಾರಕ್ಕೆ ಪೇಟೆಂಟ್ ಪಡೆದುಕೊಂಡ. ಅದಕ್ಕೆ ಶತಮಾನಗಳ ಮುಂಚೆಯೇ ಅಸ್ಟ್ರಾನಾಮಿಕಲ್ ಗಡಿಯಾರಗಳು ಮತ್ತು ಇತರ ಸಾಧನಗಳೊಂದಿಗೆ ಪ್ರಯೋಗಗಳು ನಡೆಯುತ್ತಾ ಬಂದಿದ್ದವು” ಎಂಬ ಉತ್ತರವನ್ನು ಗೂಗಲ್ ಕೊಟ್ಟಿತು.
ಖಗೋಳ ಗಡಿಯಾರಗಳು, ಜಲ ಗಡಿಯಾರಗಳು, ಪಟ್ಟಣದ ಚೌಕಿಗಳಲ್ಲಿ ಅಳವಡಿಸಿದ್ದ ಗಂಟೆಗಳು, ಕಾರ್ಖಾನೆಗಳ ಸೈರನ್‌ಗಳು, ಇವೆಲ್ಲವನ್ನೂ ಜನರು ಹಿಂದೆ ಬಳಸಿದ್ದಾರೆ. ನಮ್ಮ ಬಾಲ್ಯದಲ್ಲಿ ಫ್ಯಾಕ್ಟರಿ ಸೈರನ್‌ಗಳ ಸದ್ದು ನಮ್ಮ ಕಿವಿಗೆ ಬೀಳುತ್ತಿತ್ತು. ಹಾಗೆ. ಫ್ಯಾಕ್ಟರಿ ಸೈರನ್ ಶಬ್ದ ಕೇಳಿಸುದ್ದಂತೆಯೇ, “ಹಾ, ಈಗ ಸಮಯ ಇಷ್ಟು” ಎಂದು ನಾವು ಹೇಳುತ್ತಿದ್ದೆವು. ಅಲಾರ್ಮ್ ಗಡಿಯಾರಕ್ಕೆ ಪೇಟೆಂಟ್ ಪಡೆದದ್ದು ಫ್ರ್ಯಾನ್ಸ್ ಸಂಶೋಧಕನಾದರೂ ಅವುಗಳ ದೊಡ್ಡ ಪ್ರಮಾಣದ ತಯಾರಿಕೆಯು 1876ರಲ್ಲಿ ಅಮೆರಿಕನ್ ಸಂಶೋಧಕನಿAದ ಸೆಥ್ ಥಾಮಸ್ ಕಂಪನಿ ಮೂಲಕ ಶುರುವಾಯಿತು.
ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದು ಕಡ್ಡಾಯವಾಯಿತು. ಹಾಗೆಯೇ, ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಸಮಯಕ್ಕೆ ಸರಿಯಾಗಿ ಎದ್ದೇಳುವುದು ಕಡ್ಡಾಯವಾಗಿತ್ತು. ಇದರಿಂದಾಗಿ, ಅಲಾರ್ಮ್ ಗಡಿಯಾರ ಉದ್ಯಮ ಪ್ರವರ್ಧಮಾನಕ್ಕೆ ಬಂದಿತು. ಪ್ರಸ್ತುತ, ಅಲಾರ್ಮ್ಗಳು ವಿವಿಧ ಧ್ವನಿ ನಮೂನೆಗಳೊಂದಿಗೆ ಹೊರಬರುತ್ತಿವೆ. ಆದರೂ, ನನಗಂತೂ ಅಲಾರ್ಮ್ ಹಂಗಿಗೆ ಬೀಳದೆ ಎದ್ದೇಳುವುದನ್ನು ಎಲ್ಲರೂ ಅಭ್ಯಾಸ ಮಾಡಿಕೊಳ್ಳಬೇಕು ಎನ್ನಿಸುತ್ತದೆ. ಅಲಾರ್ಮ್ ನೆರವಿನಿಂದ ಯಾರು ಬೇಕಾದರೂ ಎಚ್ಚರಗೊಳ್ಳಬಹುದು. ಆದರೆ, ನಮ್ಮ ಮುಂದಿರುವ ಕೆಲಸದ ಸವಾಲು ಹಾಗೂ ಕಾರ್ಯಯೋಜನೆಯಿಂದ ನಿರ್ದೇಶಿತರಾಗುವುದನ್ನು ನಾವು ರೂಢಿಸಿಕೊಂಡಾಗ ಯಾವ ಅವಲಂಬನೆಯೂ ಇಲ್ಲದೆ ಸಹಜವಾಗಿ ತಂತಾನೇ ಎಚ್ಚರಗೊಳ್ಳುತ್ತೇವೆ.
ರಾತ್ರಿಯ ನಿದ್ದೆಯಿಂದ ವಿಶ್ರಾಂತಗೊಂಡ ಶರೀರವು ಪುನರ್ ಚೈತನ್ಯ ಪಡೆಯುತ್ತದೆ. ಮನಸ್ಸು ಉಲ್ಲಸಿತವಾಗಿ ‘ಇಂದಿನ ದಿನವನ್ನು ಉತ್ತಮಪಡಿಸಿಕೊಳ್ಳೋಣ, ನಿನ್ನೆಗಿಂತ ಇಂದು ಹೆಚ್ಚಿನದನ್ನು ಮಾಡೋಣ ಹಾಗೂ ಮುಂದೆ ಸಾಗೋಣ’ ಎಂದು ಉದ್ಗರಿಸುತ್ತದೆ. ನಾವು ಬೆಳಿಗ್ಗೆ ಏಳುತ್ತಿದ್ದಂತೆಯೇ ಹಾಸಿಗೆಯಲ್ಲಿ ಕುಪ್ಪಳಿಸಬೇಕು ಎನ್ನುವಷ್ಟು ಚೈತನ್ಯ ನಮ್ಮಲ್ಲಿದ್ದರೆ, ಆಗ ಎಲ್ಲವೂ ಸರಿಯಾಗಿದೆ ಎಂದರ್ಥ. ಬದುಕಿಗೊಂದು ಸ್ಪಷ್ಟ ಉದ್ದೇಶವಿದೆ ಎಂಬುದನ್ನು ಇದು ಸೂಚಿಸುತ್ತದೆ. ಹೀಗಿದ್ದಾಗ, “ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗಿರಬೇಕೆಂಬುದು ನಮ್ಮ ನಿರೀಕ್ಷೆಯಾಗಿದೆ” ಎಂದು ವಿಶ್ವಾಸದಿಂದ ಹೇಳಬಹುದು.
ಇದನ್ನೇ ಸ್ವಯಂ-ನಿರ್ವಹಣೆ ಎನ್ನುವುದು. ಇದು ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿಕೊಳ್ಳುವ ಪ್ರಕ್ರಿಯೆಯೂ ಹೌದು. ಅಲಾರ್ಮ್ ನೆರವಿಲ್ಲದೆ ಎಚ್ಚರಗೊಳ್ಳುವ ಬಗ್ಗೆ, ವೈದ್ಯೋಪಚಾರಗಳಿಲ್ಲದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ (ಕೆಲವು ಕಾಯಿಲೆಗಳನ್ನು ಹೊರತುಪಡಿಸಿ), ನಗೆಕೂಟದ ಸದಸ್ಯನಾಗದೆ ಹೃದಯ ತುಂಬಿ ನಗುವ ಬಗ್ಗೆ, ಅನಿಶ್ಚಿತತೆಯಿಲ್ಲದೆ ಬೆಳಿಗ್ಗೆ ನಡಿಗೆಗೆ ಹೋಗುವ ಬಗ್ಗೆ (ಹೋಗಬೇಕೋ ಅಥವಾ ಬೇಡವೋ ಎಂಬ ಡೋಲಾಯಮಾನವಿಲ್ಲದೆ), ಬಿಸಿ ನೀರು ಅಥವಾ ಚಹಾ ಇಲ್ಲದೆ ಬೆಳಿಗ್ಗೆ ಶೌಚವಿಧಿ ಮುಗಿಸುವ ಬಗ್ಗೆ, ಒತ್ತಡ ಅಥವಾ ಉದ್ವೇಗವಿಲ್ಲದೆ ಪ್ರಗತಿ ಸಾಧಿಸುವ ಬಗ್ಗೆ, ನಾವು ನಂಬುವ ತತ್ತ್ವಗಳನ್ನು ಸಹಜವಾಗಿ ಅನುಸರಿಸುವ ಬಗ್ಗೆ ಮತ್ತು ಮಾನಸಿಕ ಹಾಗೂ ಶಾರೀರಿಕ ಸಮತೋಲನವನ್ನು ಹೆಚ್ಚಿನ ಪ್ರಯಾಸವಿಲ್ಲದೆ ಕಾಯ್ದುಕೊಳ್ಳುವ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ.
ಸೃಷ್ಟಿಕರ್ತನು ನಮಗೆ ಸುಂದರ ಬದುಕನ್ನು ಅನುಗ್ರಹಿಸಿದ್ದಾನೆ. ಅದನ್ನು ಇನ್ನಷ್ಟು ಉನ್ನತಿಗೇರಿಸಿ ಅದರ ಸೌಂದರ್ಯವನ್ನು ಸಂಭ್ರಮಿಸುವುದು ನಮ್ಮ ಗುರಿಯಾಗಬೇಕು.
Post your Comment
Please let us know your thoughts on this story by leaving a comment.