Published in the Sunday Vijay Karnataka on 05 January, 2025
ಏನೋ ಗೊತ್ತಿರದ ಕಾರಣಗಳಿಗಾಗಿ, ಹಿಂದಿನ ಸಂಭಾಷಣೆಯ ಸಂಗತಿಗಳು ನನ್ನ ಮನಸ್ಸಿಗೆ ತೀವ್ರವಾಗಿ ನಾಟಿ ಆ ಪುಸ್ತಕವನ್ನು ಪುನಃ ಕೈಗೆತ್ತಿಕೊಳ್ಳಲೇ ಇಲ್ಲ. ಅದು ನಾನು ಆತನಕ ತುಂಬಾ ಆಸಕ್ತಿಯಿಂದ ಓದುತ್ತಿದ್ದ ಪುಸ್ತಕವಾಗಿತ್ತು. ಅದು ಪೂರ್ತಿ ಓದು ಕಾಣದೇ ಹಾಗೆಯೇ ಉಳಿದುಬಿಟ್ಟಿತು...
ನಿರಂತರ ಪ್ರಯಾಣ ಹಾಗೂ ಕೆಲಸದ ಒತ್ತಡದಲ್ಲಿ ಮುದ್ರಿತ ಪುಸ್ತಕಗಳ ಓದಿಗೆ ಸಮಯವೇ ಸಿಕ್ಕಿರಲಿಲ್ಲ. ಬದಲಿಗೆ, ಇ-ಬುಕ್, ಪಾಡ್ ಕಾಸ್ಟ್ ಗಳು ಹಾಗೂ ವಾಡ್ ಕಾಸ್ಟ್ ಗಳ ಪ್ರಪಂಚದಲ್ಲಿ ಮುಳುಗಿಹೋಗಿದ್ದೆ. ನಾನು ಕೆಲಸದಲ್ಲಿ ನಿರತವಾಗಿರುವಾಗ ಪುಸ್ತಕ ಓದಿ ನಿರೂಪಿಸಲೆಂದೇ ಯಾರನ್ನಾದರೂ ನಿಯೋಜಿಸಿಕೊಳ್ಳುವುದು ನನ್ನ ಬಹುಕಾರ್ಯ ನಿರ್ವಹಣಾ ಕೌಶಲಗಳನ್ನು ಹೆಚ್ಚಿಸುತ್ತದೆಯೇನೋ ಎನ್ನಿಸುತ್ತಿತ್ತು. ಇಂತಹ ಸಂದರ್ಭದಲ್ಲೇ ಕೋವಿಡ್ ಮಹಾಸೋಂಕು ದಾಂಗುಡಿಯಿಟ್ಟು ನಮ್ಮೆಲ್ಲರನ್ನೂ ಗೃಹಬಂದಿಗಳನ್ನಾಗಿಸಿತು. ಈ ಅವಧಿಯಲ್ಲಿ ನಾವು ದೃಶ್ಯ ಹಾಗೂ ಶ್ರವಣ ಮಾಧ್ಯಮಗಳಿಗೆ ಅಂಟಿಕೊಳ್ಳುವುದೂ ಅಧಿಕಗೊಂಡಿತು. ಇದು ಎಷ್ಟು ವಿಪರೀತವಾಯಿತೆಂದರೆ, ಕೊನೆಗೆ, ಪರದೆ ಕಣ್ಣಿಗೆ ಬಿದ್ದರೆ ಸಾಕು ತಲೆ ಚಿಟ್ಟೆನ್ನೆಸಲು ಶುರುವಾಯಿತು. ಆಗ, ಹತ್ತಿರದಲ್ಲೇ ಇದ್ದ ನನ್ನ ಬುಕ್‌ಶೆಲ್ಫ್ನಲ್ಲಿನ ಪುಸ್ತಕಗಳು, “ಚಿಂತಿಸಬೇಡ, ಇಲ್ಲಿ ನಿನಗಾಗಿ ನಾವಿದ್ದೇವೆ” ಎಂದು ಕಿವಿಯಲ್ಲಿ ಪಿಸುಗುಟ್ಟಿದ್ದಂತೆ ಭಾಸವಾಗುತ್ತಿತ್ತು.
ಅದಾದ ಮೇಲೆ, ನನ್ನೊಂದಿಗೆ ಯಾವಾಗಲೂ ಎರಡು ಪುಸ್ತಕಗಳನ್ನು ಇರಿಸಿಕೊಳ್ಳುವುದು ಶೀಘ್ರವೇ ರೂಢಿಯಾಗಿಬಿಟ್ಟಿತು. ಒಂದು ಬೆಳಿಗ್ಗೆಗೆ, ಮತ್ತೊಂದು ರಾತ್ರಿಗೆ; ಪ್ರತಿದಿನ ಕನಿಷ್ಠ ಒಂದು ಅಧ್ಯಾಯವನ್ನಾದರೂ ಓದುತ್ತಿದ್ದೆ. ಆರಂಭದಲ್ಲಿ ಇದು ಕಷ್ಟ ಎನ್ನಿಸುತ್ತಿತ್ತು. ಆದರೆ, ನಾನು ಪಟ್ಟುಬಿಡದೆ ಓದುತ್ತಿದ್ದೆ. ಕೆಲವೇ ದಿನಗಳಲ್ಲಿ ಪುಸ್ತಕದ ಓದಿನ ಪ್ರೀತಿ ಪುನಃ ನನ್ನೊಳಗೆ ಉದ್ದೀಪನಗೊಂಡಿತು. ಆ ಸನ್ನಿವೇಶದಲ್ಲಿ, ಇಂದ್ರಾ ನೂಯಿ ಅವರ ಆತ್ಮಕಥನ, ‘ಮೈ ಲೈಫ್ ಇನ್ ಫುಲ್’ ಅತ್ಯಂತ ಹೆಚ್ಚು ಬೇಡಿಕೆಯ ಪುಸ್ತಕವಾಗಿ ಮಾರಾಟದಲ್ಲಿ ಮುಂಚೂಣಿಯಲ್ಲಿತ್ತು. ಕ್ರಮೇಣ, ಕೋವಿಡ್ ಸೋಂಕು ಕ್ಷೀಣಿಸಿ ಬದುಕು ಎಂದಿನಂತೆ ಹಳಿಯ ಮೇಲೆ ಬರುತ್ತಿದ್ದಂತೆ ಬುಕ್ ಸ್ಟೋರ್‌ಗಳು ನನ್ನನ್ನು ತಮ್ಮೆಡೆಗೆ ಸೆಳೆಯಲು ಮೊದಲಾದವು. ಕಿತಾಬ್ ಖಾನಾ ಅಥವಾ ಕ್ರಾಸ್ ವರ್ಡ್ನಂತಹ ಪುಸ್ತಕದಂಗಡಿಗೆ ಎಡತಾಕುವುದು, ಅಲ್ಲಿಂದ ಪುಸ್ತಕಗಳ ಪಿಂಡಿ ಹೊತ್ತು ತರುವುದು ಮೊದಲಿನಿಂದಲೂ ನನಗೆ ಮೆಚ್ಚಿನ ಪರಿಪಾಠವೇ ಆಗಿತ್ತು. ನನ್ನ ಪತಿ ಸುಧೀರ್ ಅವರು “ಇವನ್ನೆಲ್ಲಾ ಯಾವಾಗ ಓದುತ್ತೀಯ?” ಎಂದು ತಮಾಷೆಯ ಧ್ವನಿಯಲ್ಲಿ ಕೇಳುತ್ತಿದ್ದರಾದರೂ ನನ್ನ ಈ ಅಭ್ಯಾಸ ಅಬಾಧಿತವಾಗಿ ಮುಂದುವರಿದಿತ್ತು.
ಅAತಿಮವಾಗಿ, ನಾನು ಇಂದ್ರಾ ನೂಯಿ ಅವರ ಪುಸ್ತಕ ಖರೀದಿಸಿ ಓದಲು ಶುರುಮಾಡಿದೆ. ತನ್ನ ಅಸಾಮಾನ್ಯ ಬದುಕಿನ ಪಯಣದ ಬಗೆಗೆ ಇಂದ್ರಾ ಅವರ ಸ್ಫೂರ್ತಿಯುತ ಹಾಗೂ ನೇರ ನಿರೂಪಣಾ ಶೈಲಿ ನನ್ನನ್ನು ತಕ್ಷಣವೇ ಹಿಡಿದಿಟ್ಟುಬಿಟ್ಟಿತು.
ಅದೊಂದು ದಿನ ನಮ್ಮ ಬಿಲ್ಡಿಂಗ್‌ನಲ್ಲಿ ನಾವೆಲ್ಲರೂ ಲೋಕಾಭಿರಾಮವಾಗಿ ಒಂದೆಡೆ ಸೇರಿದ್ದೆವು. ಪುಸ್ತಕಗಳು, ಓದು ಹೀಗೆ ಇನ್ನಿತರ ಸಂಗತಿಗಳ ಬಗ್ಗೆ ಮಾತಾಡುತ್ತಾ ಕುಳಿತಿದ್ದೆವು. ಆಗ, ಅಲ್ಲೊಬ್ಬರು, ನನ್ನನ್ನು, “ಯಾವ ಪುಸ್ತಕ ಓದುತ್ತಿದ್ದೀರಾ” ಎಂದು ಕೇಳಿದಾಗ ನಾನು, “ಇಂದ್ರಾ ನೂಯಿ ಅವರ ಮೈ ಲೈಫ್ ಇನ್ ಫುಲ್ ಓದುತ್ತಿದ್ದೇನೆ” ಎಂದು ಉತ್ಸಾಹದಿಂದ ಹೇಳಿದೆ. ಮುಂದುವರಿದು, “ತುಂಬಾ ಚೆನ್ನಾಗಿದೆ. ಎಷ್ಟು ಬೇಗ ಓದಿ ಮುಗಿಸುತ್ತೇನೋ ಎನ್ನಿಸುತ್ತಿದೆ” ಎನ್ನುತ್ತಿರುವಾಗಲೇ, ಬೇರೊಬ್ಬರು, “ಹೋ, ಅದೊಂದು ದೊಡ್ಡ ಮಾರ್ಕೆಟಿಂಗ್ ಗಿಮಿಕ್” ಎಂದರು. ಅದಕ್ಕೆ ದನಿಗೂಡಿಸಿದ ಮತ್ತೊಬ್ಬರು, “ಅವರ ಉತ್ಪನ್ನಗಳಲ್ಲಿ ಶುದ್ಧತೆ ಎಂಬುದೇ ಇರಲಿಲ್ಲ” ಎಂದರೆ, ಮೂರನೆಯವರೊಬ್ಬರು, “ಆ ಉತ್ಪನ್ನಗಳು ನಮ್ಮ ಬದುಕನ್ನು ಹಾಳು ಮಾಡಿದವು” ಎಂದು ಉದ್ಗರಿಸಿದರು!
ಆ ಅಭಿಪ್ರಾಯಗಳು ನನ್ನ ಮನ್ನಸ್ಸಿನಲ್ಲಿ ವಿಚಿತ್ರವೆನ್ನಿಸುವಂತಹ ಮುದ್ರೆಯೊತ್ತಿದವು. ಅದೇ ದಿನ ನಾನು ಅವರ ಪುಸ್ತಕ ಓದುವುದನ್ನು ನಿಲ್ಲಿಸಿಬಿಟ್ಟೆ. ಆಮೇಲೆ ಪುಸ್ತಕ ಓದದಿರಲು ಬೇರೆ ನೆಪಗಳು ಕೂಡ ಒಟ್ಟಾಗುತ್ತಾ ಹೋದವು. ಹೀಗಾಗಿ, ಅದುವರೆಗೂ ನನ್ನನ್ನು ಆಸಕ್ತಿಯೊಂದಿಗೆ ಓದಿಸಿಕೊಂಡಿದ್ದ ಆ ಪುಸ್ತಕವು ಪೂರ್ತಿ ಓದು ಕಾಣದೆ ಹಾಗೆಯೇ ಉಳಿದುಕೊಂಡಿತು.
“ಬೇರೆಯವರ ಮಾತನ್ನು ಕಿವಿಗೊಟ್ಟು ಆಲಿಸು, ಆದರೆ ನಿನ್ನ ಎದೆಯ ದನಿಗೆ ಕಿವಿಗೊಡು” ಎಂಬುದು ನಾನು ಯಾವಾಗಲೂ ನಂಬಿರುವ ಮಂತ್ರವಾಗಿದೆ. ಒಮ್ಮೆ ನನ್ನ ಈ ನಂಬಿಕೆಗೆ ಸವಾಲೆಸೆಯುವಂತಹ ಸನ್ನಿವೇಶ ನಾನು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಎದುರಾಯಿತು. ನಾನು ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಮೇಲೆ ಸಭಿಕರೊಬ್ಬರು ನನ್ನ ಬಳಿ ಬಂದು, “ನೀವು ಕೊಟ್ಟು ಉದಾಹರಣೆಗಳು ಅದ್ಭುತವಾಗಿದ್ದವು. ಆದರೆ ಒಂದು ಉದಾಹರಣೆ ಮಾತ್ರ ನನಗೆ ಸರಿ ಎನ್ನಿಸಲಿಲ್ಲ. ನೀವು ಯಾವ ದಂಪತಿಯನ್ನು ಉದಾಹರಿಸಿದಿರೋ ಅವರು ನನಗೆ ವೈಯಕ್ತಿಕವಾಗಿ ಗೊತ್ತು- ನೀವು ಏನನ್ನು ನೋಡುತ್ತೀರೋ ಅದು ಯಾವಾಗಲೂ ನಿಜವಾಗಿರುವುದಿಲ್ಲ. ಅದು ಬಹುಮಟ್ಟಿಗೆ ಕೇವಲ ಮಾರ್ಕೆಟಿಂಗ್ ಅಷ್ಟೇ” ಎಂದರು.
ಆ ಒಂದು ಅಭಿಪ್ರಾಯ ನನ್ನಲ್ಲಿ ಬಲವಾಗಿ ನಾಟಿಬಿಟ್ಟಿತು. ನಂತರದ ಭಾಷಣ ಕಾರ್ಯಕ್ರಮಗಳಲ್ಲಿ ಆ ನಿರ್ದಿಷ್ಟ ನಿದರ್ಶನವನ್ನು ಉದಾಹರಣೆಯಾಗಿ ನೀಡಲು ನಾನು ಹಿಂದೇಟು ಹಾಕುತ್ತಿದ್ದೆ. ಒಂದೇ ಒಂದು ಅಭಿಪ್ರಾಯ ನನ್ನ ಮೇಲೆ ಅಷ್ಟರಮಟ್ಟಿಗೆ ತೀವ್ರ ಪ್ರಭಾವ ಬೀರಿಬಿಟ್ಟಿತ್ತು.
ಬಹಳಷ್ಟು ಭಾರತೀಯರಂತೆ ನಾನು ಕೂಡ ಬಾಲ್ಯದಿಂದಲೂ ಅಮಿತಾಭ್ ಬಚ್ಚನ್ ಅವರ ಅಭಿಮಾನಿ. ರದ್ದಿ ಅಂಗಡಿಗಳಲ್ಲಿ ಖರೀದಿಸಿದ ಹಳೆಯ ಸಿನಿಮಾ ನಿಯತಕಾಲಿಕಗಳಲ್ಲಿದ್ದ ಅವರ ಚಿತ್ರಗಳನ್ನೆಲ್ಲಾ ಕತ್ತರಿಸಿ ಒಂದು ಆಲ್ಪಮ್ ಕೂಡ ಮಾಡಿದ್ದೆ. ಒಂದು ಸಲ, ದೋಸ್ತಾನಾ ಚಿತ್ರೀಕರಣದ ಸಂದರ್ಭದಲ್ಲಿ ಅವರನ್ನು ನೇರ ಭೇಟಿಯಾಗುವ ಅವಕಾಶ ನನಗೆ ಒದಗಿಬಂದಿತ್ತು. ಆಗ ಅಮಿತಾಭ್ ಅವರು ಹದಿನೈದು ನಿಮಿಷ ಕಾಲ ನನ್ನ ಆಲ್ಬಮ್ಮಿನ ಪುಟಗಳನ್ನು ಸಂತೋಷದಿAದ ತಿರುವಿಹಾಕಿದರು. ಅಷ್ಟೇ ಅಲ್ಲದೆ, ಅದರ ಮೇಲೆ ತಮ್ಮ ಸಹಿಯನ್ನೂ ಹಾಕಿದರು. ಈ ಆಲ್ಬಮ್ ಹಲವಾರು ವರ್ಷಗಳ ಕಾಲ ನನ್ನ ಪಾಲಿಗೆ ದೊಡ್ಡ ನಿಧಿಯೇ ಆಗಿತ್ತು. ಆದರೆ, ಆಮೇಲೆ, ಬಹುಶಃ ಮದುವೆಯಾದ ಮೇಲೆ, ನನ್ನ ಆ ಅಭಿಮಾನದ ಕಾಲಘಟ್ಟ ಹಿನ್ನೆಲೆಗೆ ಸರಿದಮೇಲೆ ಅದನ್ನು ಯಾವುದೋ ಅಡ್ಡ ಜ್ಞಾನದಲ್ಲಿ ಅದೆಲ್ಲಿ ಇಟ್ಟುಬಿಟ್ಟಿದ್ದೇನೋ ಎಂಬುದು ಬೇರೆ ಮಾತು.
ಅದೇನೇ ಇರಲಿ, ಅಭಿನಯ ಕಲಿಯಲು ಪ್ರಯಾಸಪಟ್ಟ ದಿನಗಳಿಂದ ಹಿಡಿದು ಬಾಲಿವುಡ್ ಮೆಗಾಸ್ಟಾರ್ ಎನ್ನಿಸಿಕೊಳ್ಳುವವರೆಗಿನ ಆರು ದಶಕಗಳ ಅವಧಿಯ ಅಮಿತಾಭ್ ಬಚ್ಚನ್ ಅವರ ಬದುಕಿನ ಯಾನವು ನನ್ನ ಕಾರ್ಪೊರೇಟ್ ತರಬೇತಿ ಸೆಷನ್‌ಗಳಲ್ಲಿ ಪ್ರಧಾನವಾಗಿ ಪ್ರಸ್ತಾಪಗೊಳ್ಳುತ್ತಲೇ ಬಂದಿದೆ. ಅಮಿತಾಭ್, ಅವರಂತೆಯೇ ಸ್ವಪ್ರಯತ್ನದಿಂದ ಪ್ರಸಿದ್ಧರಾದ ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ಕಂಗನಾ ರನೌತ್ ಅವರ ಕತೆಗಳನ್ನು ನಾನು ಸಭಿಕರೊಂದಿಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ. ಅದೇನೇ ಇದ್ದರೂ, ಅವರ ಕುರಿತಾದ ಟೀಕೆಗಳಿಗೆ ಕೊರತೆಯಿಲ್ಲ ಎಂಬುದು ಕೂಡ ನನ್ನ ಅನುಭವಕ್ಕೆ ಬಂದಿದೆ. “ನೀವು ಪರದೆ ಮೇಲೆ ನೋಡುವ ಅಮಿತಾಭ್‌ಗೂ ಪರದೆಯಾಚೆಗಿನ ಅಮಿತಾಭ್‌ಗೂ ತುಂಬಾ ವ್ಯತ್ಯಾಸವಿದೆ” ಅಥವಾ “ಅವರಿಗೆ ಎಷ್ಟು ಪ್ರಣಯ ಸಂಬAಧಗಳಿವೆ ನಿಮಗೆ ಗೊತ್ತೇ?” ಎಂಬ ಟೀಕೆಗಳು ಕೇಳಿಬರುತ್ತಲೇ ಇರುತ್ತವೆ.
ಇತ್ತೀಚೆಗೆ ನಾನು ಅಮೆರಿಕಕ್ಕೆ ಹೋಗಿದ್ದಾಗ, ಸುನೀಲಾ ಅವರಿಗೆ ಒಂದೊಮ್ಮೆ ನೆರೆಯವರಾಗಿದ್ದ ರೋಮಿ ವಿಶ್ವನಾಥನ್ ಅವರನ್ನು ಭೇಟಿಯಾದೆ. ಆಗ ನಾವಿಬ್ಬರೂ ಈ ಬಗ್ಗೆಯೇ ಚರ್ಚಿಸಿದೆವು. “ಈ ದಿನಗಳಲ್ಲಿ ನೀವು ಯಾರನ್ನೂ ಪೂಜ್ಯಭಾವನೆಯಲ್ಲಿ ಕಾಣಲಾಗದು. ಪ್ರತಿಯೊಬ್ಬರಲ್ಲೂ ಮೇಲ್ನೋಟಕ್ಕೆ ಕಾಣದ ಹುಳುಕುಗಳು ಹುದುಗಿರುತ್ತವೆ” ಎಂದರು. ಆಗ ನಾನು, “ಜೀವಂತವಾಗಿರುವ ಯಾರನ್ನೂ ಪೂಜನೀಯಗೊಳಿಸಬಾರದು ಎಂಬುದನ್ನು ನಾನೊಮ್ಮೆ ಓದಿದ್ದೆ. ಅಂಥವರ ದೋಷಗಳು ಕ್ರಮೇಣ ಹೊರಬರುವ ಸಾಧ್ಯತೆ ಹೆಚ್ಚಾಗಿರುತ್ತದೆ” ಎಂದೆ. ಇದಕ್ಕೆ ಪ್ರತಿಕ್ರಿಯಿಸಿದ ರೋಮಿ ಅವರು, “ಈಗಾಗಲೇ ಸಾವಿಗೀಡಾಗಿರುವವರು ಕೂಡ ಟೀಕೆಗೆ ಹೊರತಾದವರಲ್ಲ. ಬಹುಶಃ, ಪುರಾಣ ಪುರುಷರನ್ನು ಮಾತ್ರವೇ ಪೂಜನೀಯಗೊಳಿಸಬಹುದು” ಎಂದರು.
ನಾವು ಯಾರ ಬಗ್ಗೆ ಮೆಚ್ಚುಗೆ ತಾಳುತ್ತೇವೆ ಹಾಗೂ ಯಾರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತೇವೆ ಎಂಬುದು ತುಂಬಾ ವೈಯಕ್ತಿಕವಾದ ಆಯ್ಕೆಯಾಗಿರುತ್ತದೆ. ಈ ಬಗ್ಗೆ ಬೇರೊಬ್ಬರ ಮುಂದೆ ಹೇಳಿಕೊಂಡಾಗ ಹೆಚ್ಚಿನ ಸಂದರ್ಭಗಳಲ್ಲಿ ಅದು ಕಾವೇರಿದ ಚರ್ಚೆಯ ಕಿಡಿಯನ್ನೇ ಹೊತ್ತಿಸಿಬಿಡುತ್ತದೆ. ಇಂತಹ ಸಾಕಷ್ಟು ಅನುಭವಗಳ ನಂತರ ನಾನು, “ನಿನಗೆ ಅವರ ಬಗ್ಗೆ ಸತ್ಯ ಸಂಗತಿ ಗೊತ್ತಿದೆಯೇ?” ಅಥವಾ “ಅದೆಲ್ಲಾ ಕೇವಲ ತೋರಿಕೆಗಾಗಿ ಮಾತ್ರ” ಎಂಬ ಗಾಸಿಪ್‌ನಂತಹ ಅಭಿಪ್ರಾಯಗಳಿಗೆ ಕಿವುಡಾಗಿ ಬಿಡುವುದನ್ನು ಕಲಿತಿದ್ದೇನೆ. ಅಂತಹ ಅಭಿಪ್ರಾಯಗಳನ್ನು ನನ್ನ ಬಳಿ ಇತರರು ಹೇಳುವುದಕ್ಕೇ ಆಗದಂತೆ ತಡೆಯಲು ನನಗೆ ಸಾಧ್ಯವಾಗದು. ಆದರೆ, ಅಂತಹ ಅಭಿಪ್ರಾಯಗಳು ನನ್ನ ಮೇಲೆ ಪ್ರಭಾವ ಬೀರದಂತೆ ಜಾಗ್ರತೆ ವಹಿಸುವುದನ್ನು ರೂಢಿಸಿಕೊಂಡಿದ್ದೇನೆ.
ಈ ಸ್ವಯಂ-ಜಾಗ್ರತೆ ತುಂಬಾ ನಿರ್ಣಾಯಕವಾದುದು. ಯಾಕೆಂದರೆ, ಬಹುತೇಕ ಮತ್ಸರ ಅಥವಾ ತಪ್ಪು ಮಾಹಿತಿಯಿಂದ ಹುಟ್ಟುವ ಅಂತಹ ಅಭಿಪ್ರಾಯಗಳು ಮರೆಮಾಸದ ನೆನಪುಗಳನ್ನು ಅಚ್ಚೊತ್ತಿಬಿಡಬಹುದು. ನಾನು ಪೂರ್ತಿ ಓದದೇ ಅರ್ಧಕ್ಕೇ ನಿಲ್ಲಿಸಿದ ಇಂದ್ರಾ ನೂಯಿ ಅವರ ಪುಸ್ತಕವೇ ಇದಕ್ಕೆ ಉದಾಹರಣೆಯಾಗಿದೆ. ಈ ವಿಷಯದಲ್ಲಿ, ಸರ್ವೇಸಾಮಾನ್ಯವಾದ ಸ್ವಾಭಾವಿಕ ಟೀಕೆಗಳು ತುಂಬಾ ಒಳ್ಳೆಯ ಪುಸ್ತಕದ ನನ್ನ ಓದನ್ನು ಸ್ಥಗಿತಗೊಳಿಸಿಬಿಟ್ಟವು ಎನ್ನಬಹುದು.
ಅದಕ್ಕೆ ಬದಲಾಗಿ, ನಾನು ವಿಸ್ತೃತ ದೃಷ್ಟಿಯ ಮೇಲೆ ಗಮನ ನೀಡಬೇಕಾಗಿತ್ತು: ತಮಿಳುನಾಡಿನಲ್ಲಿ ಸಾಧಾರಣ ಕುಟುಂಬದಲ್ಲಿ ಹುಟ್ಟಿ ಕಾರ್ಪೊರೇಟ್ ಯಶಸ್ಸಿನ ಶೃಂಗಕ್ಕೇರಿದ ಇಂದ್ರಾ ನೂಯಿ ಅವರ ಬದುಕಿನ ಪಯಣವು ಛಲ ಹಾಗೂ ಪ್ರಾಮಾಣಿಕತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ. ಹಾಗೆ ನೋಡಿದರೆ, ಅಡೆತಡೆಗಳನ್ನು ಮೀರುವುದು ಹಾಗೂ ಕಾರ್ಪೊರೇಟ್ ಮೆಟ್ಟಿಲುಗಳನ್ನು ಏರುವುದು ಅಮೋಘ ಸಾಧನೆ ಎಂಬುದನ್ನು ಮನವರಿಕೆ ಮಾಡಲು ಅವರ ಕತೆಯು ಶಾಲಾ ಕಾಲೇಜುಗಳ ಎಳೆಯ ಮನಸ್ಸುಗಳಿಗೆ ಪಾಠವಾಗಲು ತುಂಬಾ ಯೋಗ್ಯವಾದುದಾಗಿದೆ.
ಇದೇ ತರ್ಕವು ಬೇರೆ ಸಿನಿಮಾ ಅಥವಾ ಕ್ರೀಡಾ ಕ್ಷೇತ್ರದ ತಾರಾ ಸಾಧಕರಿಗೂ ಅನ್ವಯವಾಗುತ್ತದೆ. ಅಂಥವರ ಪರಿಶ್ರಮ, ದೃಢಸಂಕಲ್ಪ ಹಾಗೂ ಕ್ಷಮತೆಗಳಿಂದ ನಾವು ಪ್ರೇರಣೆ ಪಡೆಯಬೇಕೇ (give ಚಿ sಠಿಚಿಛಿe iಟಿ beಣತಿeeಟಿ) ಹೊರತು ಅವರಲ್ಲಿರಬಹುದಾದ ದೋಷಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅಷ್ಟಕ್ಕೂ, ಇಲ್ಲಿ ಪರಿಪೂರ್ಣ ಎನ್ನುವವರು ಯಾರೂ ಇಲ್ಲ. ನಾವೆಲ್ಲರೂ ಕಲಿಯುತ್ತಾ ಹಾಗೂ ವಿಕಸನಗೊಳ್ಳುತ್ತಾ ಪರಿಪೂರ್ಣತೆಯೆಡೆಗಿನ ಹಾದಿಯಲ್ಲಿ ಸಾಗುತ್ತಿರುವ ಪ್ರಯಾಣಿಕರೇ ಆಗಿದ್ದೇವೆ.
ಸಣ್ಣ ಅಭಿಪ್ರಾಯವೊಂದು ಹೇಗೆ ನಿರ್ಧಾರ ತಳೆಯುವಿಕೆಯನ್ನು ಪ್ರಭಾವಿಸುತ್ತದೆ ಎಂಬುದಕ್ಕೆ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಉದಾಹರಣೆಯೊಂದನ್ನು ನೀಡಲಾಗುತ್ತದೆ. ನೀವೊಂದು ಹೊಸ ಫೋನ್ ಕೊಳ್ಳುವ ಯೋಚನೆಯಲ್ಲಿದ್ದೀರಿ ಎಂದುಕೊಳ್ಳಿ. ಬಹಳಷ್ಟು ಮಾಹಿತಿ ಕಲೆಹಾಕಿದ ಮೇಲೆ ನೀವು ಸ್ಯಾಮ್ಸಂಗ್ ಅಥವಾ ವಿವೋ ಇವೆರಡರಲ್ಲಿ ಒಂದು ಫೋನ್ ಖರೀದಿಸಬೇಕೆಂದು ನಿರ್ಧಾರ ಮಾಡಿರುತ್ತೀರಿ. ನಿಮ್ಮ ಖರೀದಿಯ ಹಿಂದಿನ ದಿವಸ ನಿಮ್ಮ ಸ್ನೇಹಿತರೊಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತಾ, “ಒನ್ ಪ್ಲಸ್ ನಾರ್ಡ್ 5 ಜಿ ಎಲ್ಲಕ್ಕಿಂತ ಬೆಸ್ಟ್!” ಎನ್ನುತ್ತಾರೆ. ತಕ್ಷಣವೇ, ನೀವು ಮಾಹಿತಿ ಕಲೆಹಾಕಲು ಮುಂಚೆ ಮಾಡಿದ್ದ ಪ್ರಯತ್ನವೆಲ್ಲಾ ಲೆಕ್ಕಕ್ಕೇ ಇಲ್ಲವಾಗಿಬಿಡುತ್ತದೆ. ನಿಮ್ಮ ಮುಂಚಿನ ನಿರ್ಧಾರವನ್ನು ಕೈಬಿಟ್ಟು ಒನ್ ಪ್ಲಸ್ ಫೋನ್ ಕೊಂಡುಕೊಳ್ಳುತ್ತೀರಿ.
ಹೀಗೆಯೇ, ನಮ್ಮ ಬದುಕಿನಲ್ಲಿ ನಮ್ಮ ಅನೇಕ ನಿರ್ಧಾರಗಳು ಇತರರ ಅಭಿಪ್ರಾಯಗಳನ್ನು ಆಧರಿಸಿರುತ್ತವೆ. ಅಗಸನ ಮಾತಿನಿಂದಾಗಿ ಸೀತೆ ಕೂಡ ಅಗ್ನಿಪರೀಕ್ಷೆ ಎದುರಿಸಲಿಲ್ಲವೇ?
ಇಂದಿನ ಕಂಟೆಂಟ್ ಸೃಷ್ಟಿಯ ಆರ್ಥಿಕತೆಯಲ್ಲಿ, ಒಡನಾಡಿಗಳ ಒತ್ತಡ, ಗೆಳೆಯರು, ಮಾಧ್ಯಮ ಹೀಗೆ ಪ್ರಭಾವ ಬೀರುವ ಅಂಶಗಳು ಸರ್ವವ್ಯಾಪಿ ಎನ್ನಬಹುದು. ಆದರೆ, ಅವೇನೇ ಇದ್ದರೂ ಸೂಕ್ತ ನಿರ್ಧಾರ ತಳೆಯುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಹೀಗಾಗಿ, ನಾವು ದೃಢವಾದ ಸ್ವತಂತ್ರ ಮನೋಭಾವ ರೂಢಿಸಿಕೊಳ್ಳುವುದು ಅತ್ಯಗತ್ಯವಿರುತ್ತದೆ.
Post your Comment
Please let us know your thoughts on this story by leaving a comment.